ರಾಮಾಯಣದ ಯುದ್ಧ ಕಾಂಡದಲ್ಲಿ ಬರುವ ಸನ್ನಿವೇಶ ಇದು. ರಾವಣನ ಮಗನಾದ ಇಂದ್ರಜಿತ್ತು ಯುದ್ಧಕ್ಕೆ ಬಂದು ಮಾಯಾಯುದ್ಧವನ್ನು ಪ್ರಾರಂಭಿಸುತ್ತಾನೆ. ಆಕಾಶದ ಮೋಡಗಳ ಹಿಂದೆ ಅವಿತುಕೊಂಡು ಬಾಣಗಳ ಮಳೆಗರೆಯುತ್ತಾನೆ. ಕ್ಷಣಕ್ಷಣಕ್ಕೆ ದಿಕ್ಕುಗಳನ್ನು ಬದಲಿಸುತ್ತ ಕಪಿಸೇನೆಯನ್ನು ಕಂಗೆಡಿಸುತ್ತಾನೆ. ನಂತರ ಮಾಯಾಸೀತೆಯನ್ನು ಯುದ್ಧಭೂಮಿಗೆ ಕರೆತರುತ್ತಾನೆ. ಈ ವಿವರಗಳನ್ನು ವಾಲ್ಮೀಕಿ ಮುನಿಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.
ಆತ ಆ ಮಾಯಾಸೀತೆಯನ್ನು ಎಲ್ಲರ ಮುಂದೆಯೇ ಹೊಡೆಯುತ್ತಾನೆ. ಪೆಟ್ಟು ತಾಳಲಾರದೇ ಆ ಸೀತೆ ಅಯ್ಯೋ ರಾಮ, ರಾಮ ಎಂದು ಕೂಗಿಕೊಂಡು ಅಳುತ್ತಾಳೆ. ಇಂದ್ರಜಿತ್ತು ಆಕೆಯ ತಲೆಗೂದಲನ್ನು ಹಿಡಿದು ಎಳೆದು ಖಡ್ಗದಿಂದ ಹೊಡೆಯುತ್ತಾನೆ. ಈ ದೃಶ್ಯವನ್ನು ನೋಡಲಾಗದೇ ಆಂಜನೇಯ ಅವನಿಗೆ ಶಾಪಕೊಡುತ್ತಾನೆ, ಕಪಿಗಳನ್ನು ಸೇರಿಸಿಕೊಂಡು ಇಂದ್ರಜಿತ್ತುವಿನ ಕಡೆಗೆ ನುಗ್ಗುತ್ತಾನೆ.
ಆಗ ಇಂದ್ರಜಿತ್ತು ಮಾಯಾಸೀತೆಯನ್ನು ಕೊಂದು ಕೆಳಗೆ ಎಸೆದುಬಿಡುತ್ತಾನೆ. ಯಾವ ಹೆಂಗಸು ನೆಲಕ್ಕೆ ಹೀಗೆ ಬಿದ್ದರೆ ಅದು ದುಃಖಕಾರಕವೇ. ಅದರಲ್ಲೂ ಸೀತೆಯಂಥ ಸಾಧ್ವಿಗೆ ಈ ಸ್ಥಿತಿ ಬಂದಾಗ ಯಾರು ಸಹಿಸುತ್ತಾರೆ?
ಹನುಮಂತ ಕಪಿಸೇನೆಯನ್ನು ಕರೆದುಕೊಂಡು ಶ್ರೀರಾಮನ ಸನ್ನಿಧಿಗೆ ಬಂದು ಇಂದ್ರಜಿತ್ತು ಸೀತೆಗೆ ಹೊಡೆದದ್ದನ್ನು ನಂತರ ಆಕೆಯನ್ನು ಕೊಂದುಹಾಕಿದ್ದನ್ನು ಹೇಳುತ್ತಾನೆ. ಈ ಮಾತನ್ನು ಕೇಳಿ ಶ್ರೀರಾಮನು ದುಃಖದಿಂದ ಬಸವಳಿದು, ಬುಡವನ್ನು ಕತ್ತರಿಸಿದ ಮರದಂತೆ ಎಚ್ಚರ ತಪ್ಪಿ ಬೀಳುತ್ತಾನೆ. ಅಣ್ಣ ಹೀಗೆ ಮೂರ್ಛೆ ಹೋಗಿ ಬಿದ್ದದ್ದನ್ನು ಕಂಡು ಲಕ್ಷ್ಮಣ ತನ್ನಣ್ಣನನ್ನು ಎರಡೂ ಕೈಗಳಿಂದ ಅಪ್ಪಿಕೊಂಡು ದುಃಖಪಡುತ್ತಾನೆ. ಅವನ ಮನಸ್ಸಿನ ರೋಷ ಭುಗಿಲ್ಲೆಂದು ಎದ್ದಿದೆ. ಅವನ ಮಾತುಗಳು ಆ ಕೋಪವನ್ನು ಪ್ರಕಟಿಸುತ್ತವೆ.
ಶುಭೇ ವರ್ತ್ಮನಿ ತಿಷ್ಠಂತಂ ತ್ವಾಮಾರ್ಯ ವಿಜಿತೇಂದ್ರಿಯಮ್
ಅನರ್ಥೇಭ್ಯೋ ನ ಶಕ್ನೋತಿ ತ್ರಾತುಂ ಧರ್ಮೋ ನಿರರ್ಥಕಃ
-ಸರ್ಗ 83, ಶ್ಲೋಕ 14.
ಅಣ್ಣಾ, ಜಿತೇಂದ್ರಿಯನಾಗಿ ಸದಾಚಾರದಲ್ಲೇ ನಿರತನಾದವನು ನೀನು. ಧರ್ಮವು ನಿನ್ನನ್ನು ಅನರ್ಥಗಳಿಂದ ಪಾರುಮಾಡಲು ಶಕ್ತವಾಗಲಿಲ್ಲ. ಧರ್ಮವೆಂಬುದು ನಿರರ್ಥಕ.
ದುಃಖತಪ್ತನಾದ ಲಕ್ಷ್ಮಣನ ಬಾಯಿಯಿಂದ ಎಂಥ ಮಾತು ಬರುತ್ತದೆ ನೋಡಿ. ಇದು ಇಂದಿಗೂ ಅನೇಕ ಸಜ್ಜನ, ಸಾತ್ವಿಕ ಜನರ ಮಾತೂ ಹೌದು. ಪ್ರಾಮಾಣಿಕವಾಗಿ ಬದುಕಿದ ವ್ಯಕ್ತಿಗೆ ಅನ್ಯಾಯವಾದಾಗ ಅವರು ಹೇಳುವ ಮಾತೂ ಇದೇ ಅಲ್ಲವೇ?
ಧರ್ಮವೆಂಬುದು ನಿರರ್ಥಕವಾದದ್ದು. ನಮಗೆಲ್ಲ ಹೀಗೆ ಪದೇ ಪದೇ ಎನ್ನಿಸುತ್ತಿಲ್ಲವೇ? ಈ ಮಾತುಗಳಲ್ಲಿ ಎಷ್ಟೊಂದು ಹತಾಶೆ, ಉದ್ವೇಗ ತುಂಬಿದೆ!
ಲಕ್ಷ್ಮಣ ಇನ್ನೂ ಮುಂದುವರಿದು ಹಣವಿಲ್ಲದವನ ಪಾಡು ಯಾರಿಗೂ ಬೇಡ, ಎಲ್ಲವೂ ಹಣವಿದ್ದವರಿಗೆ ಮಾತ್ರ ದಕ್ಕುತ್ತದೆ ಎಂದು ಸಂಕಟಪಡುತ್ತಾನೆ.
ಯಸ್ಯಾರ್ಥಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ
ಯಸ್ಯಾರ್ಥಾಃ ಸ ಪುಮಾನ್ ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ
ಯಸ್ಯಾರ್ಥಾಃ ಸ ಚ ವಿಕ್ರಾಂತೋ ಯಸ್ಯಾರ್ಥಾಃ ಸ ಚ ಬುದ್ಧಿಮಾನ್
ಯಸ್ಯಾರ್ಥಾಃ ಸ ಮಹಾಭಾಗೋ ಯಸ್ಯಾರ್ಥಾಃ ಸ ಗುಣಾಧಿಕಃ
ಹಣವಿದ್ದವನಿಗೆ ಎಲ್ಲರೂ ಮಿತ್ರರೇ, ಎಲ್ಲರೂ ಬಂಧುಗಳೇ! ಈ ಲೋಕದಲ್ಲಿ
ಹಣವಂತನೇ ಪುರುಷ, ಹಣವಂತನೇ ಪಂಡಿತ; ಹಣವುಳ್ಳವನೇ ಪರಾಕ್ರಮಿ,
ಅವನೇ ಬುದ್ಧಿವಂತ! ಹಣವುಳ್ಳವನೇ ದೊಡ್ಡ ಮನುಷ್ಯ, ಅವನೇ ಗುಣಶಾಲಿ. ಇದು ರಾಮಾಯಣದ ಕಾಲದ ಮಾತೇ ಎಂದು ಆಶ್ಚರ್ಯವಾಗುತ್ತದಲ್ಲವೇ? ಮನಸ್ಸು ವಿಹ್ವಲವಾದಾಗ, ನೋವಿನಲ್ಲಿ ಬೆಂದುಹೋದಾಗ ಇಂಥ ಮಾತು ಯಾವ ಕಾಲದಲ್ಲೂ ಬರುತ್ತವೆ. ಶಕ್ತಿಯಿಲ್ಲದಿದ್ದರೂ ಕೇವಲ ಹಣದ ಬೆಂಬಲದಿಂದ, ಅಹಂಕಾರದಿಂದ ಮೆರೆಯುವವರನ್ನು ಕಂಡಾಗ, ಅಧರ್ಮದಿಂದಲೇ ಅಧಿಕಾರವನ್ನು, ಅದರ ಮೂಲಕ ಜನಮನ್ನಣೆಯನ್ನು ಪಡೆದವರನ್ನು ನೋಡಿದಾಗ ಧರ್ಮ ನಿಷ್ಪ್ರಯೋಜಕ ಎನ್ನಿಸೀತು. ಆದರೆ ಅದು ಸರಿಯಲ್ಲ. ಮುಂದೆ ರಾಮಾಯಣದಲ್ಲಿ ಇದೇ ಲಕ್ಷ್ಮಣ ಅಣ್ಣ ಶ್ರೀರಾಮನ ಧರ್ಮರಕ್ಷಣೆಗೆ ಒತ್ತಾಸೆಯಾಗಿ ನಿಂತು ಹೋರಾಡಿ ಅಧರ್ಮಿ ರಾವಣನ ಪರಿವಾರವನ್ನು ಕೊಂದದ್ದನ್ನು ನೋಡಿದ್ದೇವೆ. ಇಂದಿಗೂ ಕೆಲಕಾಲ ಮದಾಂಧರಾಗಿ, ಅಧರ್ಮದಿಂದ ಹಣಗಳಿಸಿ ಮೆರೆದು ಈಗ ಜೈಲಿನ ಕಂಬಿಗಳ ಹಿಂದೆ ತೋರಿಕೆಯ ಪಶ್ಚಾತ್ತಾಪದ ಕಣ್ಣೀರು ಸುರಿಸುವವರನ್ನೂ ಕಂಡಿದ್ದೇವೆ.
ಅಧರ್ಮ ದೀಪಾವಳಿಯಲ್ಲಿ ಮಕ್ಕಳು ಹಚ್ಚುವ ಬೆಂಕಿಯ ಕುಂಡದಂತೆ. ಅದು ಬಣ್ಣಬಣ್ಣದ ಕಿರಣಗಳನ್ನು, ಕಿಡಿಗಳನ್ನು ಹಾರಿಸುತ್ತ ಕಣ್ಣು ಕೋರೈಸುವಾಗ ತುಂಬ ಆಕರ್ಷಕವಾಗಿ ಕಾಣುತ್ತದೆ. ಆದರೆ ಅದು ಉರಿಯುವುದು ಕ್ಷಣಕಾಲ ಮಾತ್ರ. ಮತ್ತೆ ಅಂಧಕಾರ. ಧರ್ಮ, ದೇವರ ಮುಂದೆ ಹಚ್ಚಿದ ನಂದಾದೀಪ. ಅದು ಕಣ್ಣು ಕೋರೈಸಲಾರದು, ಆದರೆ ಹೆಚ್ಚು ಕಾಲ ಬದುಕುವಂಥದ್ದು, ನೆಮ್ಮದಿ ನೀಡುವಂಥದ್ದು. ಅದು ನಮಗೆ ಬೇಕಾದದ್ದು.

No comments:
Post a Comment